ಮಡಿಕೇರಿ: ದೈವವನ್ನು ಹೋಲುವ ರೀತಿಯಲ್ಲಿ ಮದುಮಗನಿಗೆ ವೇಷ ಹಾಕಿ ಅತಿರೇಕದ ವರ್ತನೆ ಆರೋಪ: ಯುವಕರ ವಿರುದ್ಧ ಪ್ರಕರಣ ದಾಖಲು
ಮಡಿಕೇರಿ: ಕೊಡಗಿನ ಎಮ್ಮೆಮಾಡು ಗ್ರಾಮದಲ್ಲಿ ನಡೆದ ಮದುವೆ ಸಮಾರಂಭವೊಂದರಲ್ಲಿ ತುಳುನಾಡಿನ ದೈವವನ್ನು ಹೋಲುವ ರೀತಿಯಲ್ಲಿ ಮದುಮಗನಿಗೆ ವೇಷ ಹಾಕಿ ಅತಿರೇಕದ ವರ್ತನೆ ತೋರಿದ ಬಗ್ಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.
ಇದೀಗ ದೈವ ಮತ್ತು ದೈವ ನರ್ತಕರನ್ನು ಅವಹೇಳನ ಮಾಡಿದ ಘಟನೆ ಸಂಬಂಧ ನಾಪೊಕ್ಲು ಪೊಲೀಸ್ ಠಾಣೆಯಲ್ಲಿ ಯುವಕರ ವಿರುದ್ಧ ಪ್ರಕರಣ ದಾಖಲಾಗಿತ್ತು.
ಆ ಬೆನ್ನಲ್ಲೇ ಫೈಜಲ್ ಸಾಮಾಜಿಕ ಜಾಲತಾಣದ ಮೂಲಕ ಕ್ಷಮೆಯಾಚಿಸಿದ್ದಾರೆ. ವಿಡಿಯೋವನ್ನು ಉದ್ದೇಶಪೂರ್ವಕವಾಗಿ ಮಾಡಿರಲಿಲ್ಲ. ವಿವಾಹವೊಂದರ ನಂತರ ಖಾಸಗಿಯಾಗಿ ಮಾತನಾಡಿದ ಮಾತುಗಳು ವೈರಲ್ ಆಗಿಬಿಟ್ಟವು. ಇದರಿಂದ ಯಾವುದೇ ಸಮುದಾಯಕ್ಕೆ ನೋವಾಗಿದ್ದರೆ, ತಾವು ಕ್ಷಮೆಯಾಚಿಸುವುದಾಗಿ ತಿಳಿಸಿದ್ದಾರೆ.
ಜಿಲ್ಲೆಯ ಎಮ್ಮೆಮಾಡು ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದ ವಿವಾಹ ಸಮಾರಂಭವೊಂದರಲ್ಲಿ ಈ ಅಚಾತುರ್ಯ ಸಂಭವಿಸಿದೆ ಎನ್ನಲಾಗಿದೆ. ಮದುವೆಯ ಸಂಭ್ರಮದ ನಡುವೆ ಯುವಕರ ತಂಡವೊಂದು ದೈವ ನರ್ತನವನ್ನು ಅಣಕಿಸುವಂತೆ ವರ್ತಿಸಿ, ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ದೈವ ಭಕ್ತರು ಹಾಗೂ ಸ್ಥಳೀಯ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದವು. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಹಿನ್ನೆಲೆಯಲ್ಲಿ ನಾಪೊಕ್ಲು ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.
ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ವಿಡಿಯೋ ಸಂದೇಶ ಬಿಡುಗಡೆ ಮಾಡಿರುವ ಆರೋಪಿ ಫೈಜಲ್, ತನ್ನ ಕೃತ್ಯಕ್ಕೆ ವಿಷಾದ ವ್ಯಕ್ತಪಡಿಸಿದ್ದಾನೆ. “ನಾನು ಈ ವಿಡಿಯೋವನ್ನು ಉದ್ದೇಶಪೂರ್ವಕವಾಗಿ ಮಾಡಿರಲಿಲ್ಲ. ಮದುವೆ ಕಾರ್ಯಕ್ರಮ ಮುಗಿದ ನಂತರ ಖಾಸಗಿಯಾಗಿ ಕುಳಿತು ಮಾತನಾಡುತ್ತಿದ್ದ ಮಾತುಗಳು ಅಕಸ್ಮಾತ್ ಆಗಿ ವೈರಲ್ ಆಗಿವೆ. ನಮ್ಮ ವರ್ತನೆಯಿಂದ ಯಾವುದೇ ಸಮುದಾಯಕ್ಕೆ ನೋವಾಗಿದ್ದರೆ ನಾನು ಬಹಿರಂಗವಾಗಿ ಕ್ಷಮೆಯಾಚಿಸುತ್ತೇನೆ,” ಎಂದು ಆತ ತಿಳಿಸಿದ್ದಾನೆ.




