March 24, 2026

ಪಣಕಜೆಯಲ್ಲಿ ಟೋಲ್ ಗೇಟ್ ನಿರ್ಮಾಣ ವಿರುದ್ಧ ತಾಲೂಕಿನ ಜನತೆ ಒಗ್ಗಟ್ಟಾಗಿ ಹೋರಾಡಬೇಕು: ನವಾಝ್ ಕಟ್ಟೆ

0
IMG-20260324-WA0002.jpg

ಬೆಳ್ತಂಗಡಿ: ಮಂಗಳೂರು- ಕಡೂರು ರಾಷ್ಟ್ರೀಯ ಹೆದ್ದಾರಿ ನಾಲ್ಕು ಪಥದ ರಸ್ತೆಯಾಗಿ ಮೇಲ್ದರ್ಜೆಗೆ ಏರುತ್ತಿದ್ದು, ಇದರ ಭಾಗವಾಗಿ ಬೆಳ್ತಂಗಡಿ ತಾಲೂಕಿನ ಪಣಕಜೆ ಸಮೀಪ ಟೋಲ್ ಗೇಟ್ ನಿರ್ಮಾಣಕ್ಕೆ ಎಸ್‌ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ನವಾಝ್ ಕಟ್ಟೆಯವರು ವಿರೋಧವನ್ನು ವ್ಯಕ್ತಪಡಿಸಿದ್ದಾರೆ.

ಬೆಳ್ತಂಗಡಿ ತಾಲೂಕಿಗೆ ಟೋಲ್ ಗೇಟ್ ಬೇಡ . ಇದರ ವಿರುದ್ಧ ಪಕ್ಷತೀತವಾಗಿ ಹೋರಾಟ ನಡೆಸುವ ಅನಿವಾರ್ಯತೆ ಇದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸರಕಾರ ಪಣಕಜೆ ಟೋಲ್ ಗೇಟ್ ನಿರ್ಮಾಣ ಪ್ರಸ್ತಾವನೆಯನ್ನು ಕೂಡಲೇ ಹಿಂಪಡೆಯಬೇಕು. ಜನಸಾಮಾನ್ಯರಿಗೆ ಹೊರೆ ಈ ಯೋಜನೆ ಶಾಶ್ವತವಾಗಿ ರದ್ದಾಗಬೇಕು. ಬೇಡಿಕೆ ಈಡೇರದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿಯಲ್ಲಿ ಅವ್ಯವಸ್ಥೆ ನಿಧಾನಗತಿ, ಸ್ವಜನ ಪಕ್ಷಪಾತದ ದೂರುಗಳು ಈಗಾಗಲೇ ಕೇಳಿಬರುತ್ತಿದ್ದು, ಹೆದ್ದಾರಿ ಕಾಮಗಾರಿ ಶೇ.50 ಶೇಕಡಾ ಪೂರ್ಣಗೊಳ್ಳದೆ ತರಾತುರಿಯಿಂದ ಟೋಲ್ ಗೇಟ್ ನಿರ್ಮಿಸುತ್ತಿರುವುದು ಕಾಮಗಾರಿ ಪೂರ್ಣಗೊಳ್ಳದೆ ಬಲವಂತದ ಟೋಲ್ ಸುಲಿಗೆ ಆರಂಭಗೊಳ್ಳುವ ಸಾಧ್ಯತೆ ಕುರಿತು ನಾಗರಿಕರಲ್ಲಿ ಆತಂಕ ಮನೆ ಮಾಡಿದೆ. ಅದಲ್ಲದೆ, ಹೆದ್ದಾರಿ ಕಾಮಗಾರಿ ಸಂದರ್ಭದಲ್ಲಿ ನಾಗರಿಕರ, ಸ್ಥಳೀಯರ ಯಾವುದೇ ದೂರುಗಳಿಗೆ ಹೆದ್ದಾರಿ ಪ್ರಾಧಿಕಾರ ಸ್ಪಂದಿಸುತ್ತಿಲ್ಲ. ಪರಿಗಣಿಸುತ್ತಿಲ್ಲ ಎಂಬ ಆಕ್ರೋಶವೂ ಸಾರ್ವಜನಿಕರಲ್ಲಿದೆ.

40 ಕಿಲೋಮೀಟರ್ ಅಂತರದಲ್ಲಿ ಎರಡು ಟೋಲ್ ಗೇಟ್ ಇರಬಾರದು ಎಂದು ನಿಯಮ ಇದೆ. ಆ ನಿಯಮಗಳನ್ನು ಉಲ್ಲಂಘನೆ ಮಾಡಿ, ಪಣಕಜೆ ಬಳಿ ಅಕ್ರಮ ಟೋಲ್ ಪ್ಲಾಜಾ ನಿರ್ಮಾಣ ಕೆಲಸ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ಥಳೀಯರಿಗೆ ಹೊರೆಯಾಗುತ್ತಿರುವ ಟೋಲ್‌ ಗೇಟ್‌ ನಿರ್ಮಾಣ ಕೈಬಿಡಬೇಕು. ಇಲ್ಲದಿದ್ದರೆ ಗಂಭೀರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಪಣಕಜೆ ಟೋಲ್ ಗೇಟ್ ನಿರ್ಮಾಣ ಕಾರ್ಯ ಅನಧಿಕೃತವಾಗಿದ್ದು ಈ ಬಗ್ಗೆ ಪರಿಶೀಲನೆ ಮಾಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ . ಈ ಬಗ್ಗೆ ರಾಜ್ಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಸಭೆ ಮಾಡಿ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!