June 13, 2026

ಮಂಗಳೂರು: ಅರಣ್ಯಾಧಿಕಾರಿಯ ಮನೆಗೆ ನುಗ್ಗಿದ ಕಳ್ಳರು: ಬೈಕ್ ಸಹಿತ ಹತ್ತೂವರೆ ಲಕ್ಷ ರೂ. ನಗದು, 181 ಗ್ರಾಂ ಚಿನ್ನ, ಬೆಳ್ಳಿ ಕಳವು

0
image_editor_output_image486593165-1772789313066.jpg

ಮಂಗಳೂರು: ಅರಣ್ಯಾಧಿಕಾರಿಯೋರ್ವರು ನೆಲೆಸಿದ್ದ ಬಾಡಿಗೆ ಮನೆಗೆ ನುಗ್ಗಿದ ಕಳ್ಳರು ಬೈಕ್ ಸಹಿತ ಹತ್ತೂವರೆ ಲಕ್ಷ ರೂಪಾಯಿ ನಗದು, 181 ಗ್ರಾಂ ಚಿನ್ನ ಮತ್ತು ಬೆಳ್ಳಿಯನ್ನು ದೋಚಿದ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಕಾಪಿಕಾಡುವಿನ ಅಂಬಿಕಾ ರೋಡ್ ಎಂಬಲ್ಲಿ ನಡೆದಿದೆ.

ಕೋಟೆಕಾರು ಉಪ ವಲಯ ಅರಣ್ಯಾಧಿಕಾರಿ ಮೆಹಬೂಬ್ ಸಾಬ್ ಗುಡಿಹೊಲ ಅವರು ವಾಸವಿದ್ದ ಅಂಬಿಕಾರೋಡ್ ಕಾಪಿಕಾಡಿನ ಬಾಡಿಗೆ ಮನೆಯಲ್ಲಿ ಕಳ್ಳತನ ನಡೆದಿದ್ದು ಘಟನೆ‌ ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ.

ಮೆಹಬೂಬ್ ಸಾಬ್ ತನ್ನ ಪತ್ನಿ ಮತ್ತು ಪುಟ್ಟ ಮಗುವಿನೊಂದಿಗೆ ಅಂಬಿಕಾ ರೋಡ್ ನ ಬಾಡಿಗೆ ಮನೆಯಲ್ಲಿ ಕಳೆದ ಆರು ತಿಂಗಳುಗಳಿಂದ ವಾಸವಿದ್ದರು. ಕಳೆದ ಶುಕ್ರವಾರ ಮಧ್ಯಾಹ್ನ ಮೆಹಬೂಬ್ ಕುಟುಂಬದೊಂದಿಗೆ ತನ್ನ ಊರಾದ ಕೊಪ್ಪಳಕ್ಕೆ ತೆರಳಿದ್ದರು. ಇಂದು ಬೆಳಗ್ಗೆ ಊರಿಂದ ಮರಳಿದಾಗ ಈ ಕಳವು ಕೃತ್ಯ ಬೆಳಕಿಗೆ ಬಂದಿದೆ.

ಮನೆಯೊಳಗೆ ನುಗ್ಗಿದ ಕಳ್ಳರು ಹಾಲ್ ಮತ್ತು ಎರಡು ಕೋಣೆಯೊಳಗಿನ ಕಪಾಟುಗಳನ್ನು ಜಾಲಾಡಿದ್ದು ,ಲಾಕರ್ ಗಳಲ್ಲಿದ್ದ 181 ಗ್ರಾಂ ಚಿನ್ನ, ಮಗುವಿನ ಬೆಳ್ಳಿಯ ಆಭರಣಗಳು ಹಾಗೂ ಮೆಹಬೂಬ್ ಬ್ಯಾಂಕಿಂದ ಸಾಲ ಪಡೆದಿದ್ದ ಹತ್ತೂವರೆ ಲಕ್ಷ ರೂ. ನಗದನ್ನ ದೋಚಿದ್ದಾರೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.
ಘಟನಾ ಸ್ಥಳಕ್ಕೆ ಉಳ್ಳಾಲ ಪೊಲೀಸರು, ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ತನಿಖೆ ಕೈಗೆತ್ತಿಕೊಂಡಿದ್ದಾರೆ. ಕಾಪಿಕಾಡು ಪ್ರದೇಶದಲ್ಲಿ ಸಾಕಷ್ಟು ಮನೆಗಳಿದ್ದರೂ ಕಳ್ಳತನ ಯಾವಾಗ ನಡೆದಿದೆಯೆಂದು ಯಾರಿಗೂ ಸ್ಪಷ್ಟ ಮಾಹಿತಿ ಇಲ್ಲ. ಕಳ್ಳತನ ನಡೆದ ಮನೆ ಹಾಗೂ ನೆರೆಮನೆಗಳಲ್ಲಿ ಸಿಸಿಟಿವಿಗಳೂ ಇಲ್ಲದೆ ಪೊಲೀಸರಿಗೆ ಪ್ರಕರಣದ ತನಿಖೆ ಸವಾಲಾಗಿ ಪರಿಣಮಿಸಿದೆ.

Leave a Reply

Your email address will not be published. Required fields are marked *

error: Content is protected !!