March 13, 2026

ಮಂಗಳೂರು: 2020ರಲ್ಲಿ ನಡೆದ ಕೊಲೆ ಪ್ರಕರಣ: ನಕಲಿ ಪಾಸ್ ಪೋರ್ಟ್ ಬಳಸಿ ವಿದೇಶದಲ್ಲಿ ತಲೆ ಮರೆಸಿಕೊಂಡಿದ್ದ ಆರೋಪಿಯ ಬಂಧನ

0
image_editor_output_image309991158-1751432175905.jpg

ಮಂಗಳೂರು: 2020ರಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನಿಂದ ಜಾಮೀನು ರದ್ದಾಗಿದ್ದರೂ ನಕಲಿ ಪಾಸ್ ಪೋರ್ಟ್ ಬಳಸಿ ವಿದೇಶದಲ್ಲಿ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಮಂಗಳೂರು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಬಂಧಿತನನ್ನು ಮೊಹಮ್ಮದ್ ಮುಸ್ತಫಾ @ ಮುಸ್ತಾ ಎಂದು ಗುರುತಿಸಲಾಗಿದೆ.

ಆರೋಪಿ ಮೊಹಮ್ಮದ್ ಮುಸ್ತಫಾ 2020ರ ಜೂನ್ 5 ರಂದು ಮುಲ್ಕಿಯ ವಿಜಯ ಸನ್ನಿದಿ ಹೆದ್ದಾರಿ ಬಳಿ ಹಾಡುಹಗಲಿನಲ್ಲಿ ರಸ್ತೆಯಲ್ಲಿ ಅಬ್ದುಲ್ ಲತೀಫ್ ಎಂಬವನನ್ನು ಇತರ ಆರೋಪಿಗಳೊಂದಿಗೆ ಸೇರಿ ಕೊಲೆ ಮಾಡಿದ್ದ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ದಾವೂದ್ ಹಕೀಂ, ಮೊಹಮ್ಮದ್ ಮುಸ್ತಾಫ ಮತ್ತು ಇತರರು ಒಟ್ಟು 10 ಮಂದಿ ವಿರುದ್ದ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿರುತ್ತದೆ. ಹಾಲಿ ನ್ಯಾಯಾಲಯದ ವಿಚಾರಣಾ ಹಂತದಲ್ಲಿರುತ್ತದೆ.

ಆರೋಪಿಗೆ 2020ರ ಅಕ್ಚೋಬರ್ 10 ರಂದು ಹೈಕೋರ್ಟ್ ಜಾಮೀನು ನೀಡಿತ್ತು. ಸುಪ್ರೀಂ ಕೋರ್ಟ್ 2022ರ ಏಪ್ರಿಲ್ 22ರಂದು ಆತನ ಜಾಮೀನು ರದ್ದುಪಡಿಸಿತ್ತು. ಬಳಿಕ ಆರೋಪಿಯು ನಕಲಿ ಪಾಸ್ ಪೋರ್ಟ್ ಬಳಸಿಕೊಂಡು ವಿದೇಶಕ್ಕೆ ಪರಾರಿಯಾಗಿದ್ದ. ಆರೋಪಿಯು ಅಕ್ರಮವಾಗಿ ಒಮನ್ ದೇಶದಿಂದ ನೇಪಾಳದ ಮೂಲಕ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದ. ಈ ಬಗ್ಗೆಯೂ ಆರೋಪಿ ವಿರುದ್ಧ ಪ್ರಕರಣ ದಾಖಲಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಆರೋಪಿ ಮೂರು ವರ್ಷಗಳಿಂದ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗಿರಲಿಲ್ಲ. ಆರೋಪಿ ಕುರಿತು ಸುಳಿವು ಪಡೆದ ಪೊಲೀಸರ ವಿಶೇಷ ತಂಡ ಮೂಲ್ಕಿಯ ಪಕ್ಷಿಕೆರೆ ಬಳಿ ಸೋಮವಾರ ಆತನನ್ನು ಪತ್ತೆ ಮಾಡಿ ಬಂಧಿಸಲಾಗಿದೆ. ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಪೊಲೀಸ್ ಕಮಿಷನ‌ರ್ ಸುಧೀರ್ ಕುಮಾರ್ ರೆಡ್ಡಿ ಅವರು ತಿಳಿಸಿದ್ದಾರೆ.

ಆರೋಪಿ ನಕಲಿ ಪಾಸ್ ಪೋರ್ಟ್ ಹೊಂದಿರುವ ಬಗ್ಗೆ ಬೆಂಗಳೂರಿನ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆತನ ವಿರುದ್ಧ ಮೂಲ್ಕಿ ಠಾಣೆಯಲ್ಲಿ 4 ಮತ್ತು ಇತರೆ ಜಿಲ್ಲೆಯಲ್ಲಿ ಒಟ್ಟು 5 ಪ್ರಕರಣಗಳು ದಾಖಲಾಗಿವೆ. ಚಿಕ್ಕಮಗಳೂರು, ಉಡುಪಿ ಜಿಲ್ಲೆಯ ಠಾಣೆಗಳಲ್ಲಿ ಆತನ ವಿರುದ್ಧ ಎರಡು ಪ್ರಕರಣಗಳಲ್ಲಿ ವಾರಂಟ್ ಜಾರಿಯಾಗಿತ್ತು.

Leave a Reply

Your email address will not be published. Required fields are marked *

error: Content is protected !!