ಮಂಗಳೂರು: ಓವರ್ ಟೇಕ್ ವಿಷಯದಲ್ಲಿ ಕಾರು ಚಾಲಕ, ಬಸ್ ಸಿಬ್ಬಂದಿ ನಡುವೆ ಗಲಾಟೆ
ಮಂಗಳೂರು: ಓವರ್ ಟೇಕ್ ವಿಷಯದಲ್ಲಿ ಕಾರು ಚಾಲಕ ಮತ್ತು ಬಸ್ ಸಿಬಂದಿಯ ನಡುವೆ ಗಲಾಟೆಯ ಘಟನೆ ಮಂಗಳೂರು ನಗರ ಟ್ರಾಫಿಕ್ ಉತ್ತರ ಪೊಲೀಸ್ ಠಾಣೆ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನಡೆದಿದ್ದು, ಈ ಕುರಿತ ವಿಡಿಯೋ ವೈರಲ್ ಆಗಿದೆ.
ಮಂಗಳೂರಿನಿಂದ ಮೂಲ್ಕಿ ಕಡೆಗೆ ಸಂಚರಿಸುತ್ತಿದ್ದ ಬಸ್ಸನ್ನು ಚಲಾಯಿಸುತ್ತಿದ್ದ ಚಾಲಕ ಕಾರೊಂದನ್ನು ಓವರ್‌ಟೇಕ್ ಮಾಡಲು ಯತ್ನಿಸಿದ ವಿಚಾರದಲ್ಲಿ ಈ ಗಲಾಟೆ ಸಂಭವಿಸಿದೆ.
ಕಾರು ಚಾಲಕ ಮತ್ತು ಅದರಲ್ಲಿದ್ದ ಪ್ರಯಾಣಿಕರು ಬಸ್ಸನ್ನು ತಡೆದು ನಿಲ್ಲಿಸಿ ಕಂಡಕ್ಟರ್ ಮತ್ತು ಚಾಲಕನಿಗೆ ಬೈದು ನಿಂದಿಸುತ್ತಿರುವುದು ಹಾಗೂ ಬಸ್ ಚಾಲಕನನ್ನು ಕೆಳಗಿಳಿಯಲು ಬಲವಂತ ಪಡಿಸುತ್ತಿರುವುದು ಮತ್ತು ಈ ಘಟನೆಯ ವಿಡಿಯೋ ಮಾಡುತ್ತಿದ್ದ ಬಸ್ ಪ್ರಯಾಣಿಕರನ್ನು ಕಾರಿನಲ್ಲಿದ್ದವರು ಬೈದು ನಿಂದಿಸುತ್ತಿರುವುದು ವೈರಲ್ ಆಗಿರುವ ವೀಡಿಯೋದಲ್ಲಿದೆ.
ಬಸ್ ಸಿಬಂದಿ ಮತ್ತು ಕಾರು ಚಾಲಕನನ್ನು ಟ್ರಾಫಿಕ್ ಉತ್ತರ ಪೊಲೀಸ್ ಠಾಣೆಗೆ ಕರೆದೊಯ್ದು ಸಂಚಾರ ನಿಯಮ ಉಲ್ಲಂಘಿಸಿದ ಬಗ್ಗೆ ಕೇಸು ದಾಖಲಸಿ ಎರಡೂ ಕಡೆಯವರಿಗೆ ತಲಾ ಒಂದು ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ. ಬಳಿಕ ಎರಡೂ ಕಡೆಯವರು ಎಫ್‌ಐಆರ್ ದಾಖಲಿಸಿಸುವುದು ಬೇಡ ಎಂಬುದಾಗಿ ಲಿಖಿತವಾಗಿ ಹೇಳಿಕೆ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.




