ಉಡುಪಿ: ರೈಲ್ವೇ ಮೇಲ್ಸೇತುವೆ ಕಾಮಗಾರಿ ವೇಳೆ ಮಗುಚಿ ಬಿದ್ದ ಕ್ರೇನ್
ಉಡುಪಿ: ಇಂದ್ರಾಳಿ ರೈಲ್ವೇ ಮೇಲ್ಸೇತುವೆ ಕಾಮಗಾರಿ ವೇಳೆ ಗರ್ಡರ್ ಎಳೆಯುತ್ತಿದ್ದ ಕ್ರೇನ್ ಮಗುಚಿ ಬಿದ್ದ ಘಟನೆ ಗುರುವಾರ ತಡರಾತ್ರಿ ನಡೆದಿದೆ.
ಸ್ಟೀಲ್ ಬ್ರಿಡ್ಜ್ ನಿರ್ಮಾಣ ಸಂಬಂಧ ಗರ್ಡರ್‌ಗಳನ್ನು ಜೋಡಿಸುವ ಹಾಗೂ ವೆಲ್ಡಿಂಗ್ ಕಾರ್ಯ ಹಗಲಿರುಳು ನಡೆಯುತ್ತಿದೆ. ಟನ್‌ಗಟ್ಟಲೆ ಭಾರ ಇರುವ ಗರ್ಡರ್‌ಗಳನ್ನು ಸುಲಭದಲ್ಲಿ ಎತ್ತಲು ಸಾಧ್ಯವಿಲ್ಲ. ಇದನ್ನು ಎತ್ತಲಿಕ್ಕಾಗಿಯೇ ಎರಡು ಕೇನ್‌ಗಳನ್ನು ಬಳಸಿಕೊಳ್ಳಲಾಗುತ್ತಿದೆ. ಗುರುವಾರ ರಾತ್ರಿ ಗರ್ಡರ್ ಎತ್ತುವ ಸಂದರ್ಭದಲ್ಲಿ ಒಂದು ಕ್ರೇನ್ ಭಾರ ತಡೆಯಲಾದರೆ ರೋಪ್ ತುಂಡಾಗಿ ರಸ್ತೆ ಮಧ್ಯದಲ್ಲಿಯೇ ಮಗುಚಿ ಬಿದ್ದಿದೆ.
ಈ ವೇಳೆ ಕಾರ್ಮಿಕರು ಯಾರೂ ಸಮೀಪ ಇಲ್ಲದೇ ಇದ್ದುದರಿಂದ ಯಾವುದೇ ಅಪಾಯ ಸಂಭವಿಸಿಲ್ಲ. ತತ್‌ಕ್ಷಣವೇ ಅಲ್ಲೇ ಸಮೀಪವಿದ್ದ ಇನ್ನೊಂದು ಕ್ರೇನ್ ಮೂಲಕ ಬಿದ್ದಿದ್ದ ಕೇನ್ ಅನ್ನು ಎತ್ತಲಾಯಿತು. ಅನಂತರ ಕಾಮಗಾರಿ ಪ್ರಕ್ರಿಯೆ ಮುಂದುವರಿಯಿತು.




