ತಮಿಳುನಾಡಿನ ಪಟಾಕಿ ತಯಾರಿಕಾ ಕಾರ್ಖಾನೆಯಲ್ಲಿ ಸ್ಫೋಟ: 10 ಮಂದಿ ಸಾವು
ವಿರುದುನಗರ: ಪಟಾಕಿ ಘಟಕದ ವಿನ್ನರ್ ನಲ್ಲಿ ಹಠಾತ್ ಸ್ಫೋಟ ಸಂಭವಿಸಿ 10 ಮಂದಿ ಸಾವನ್ನಪ್ಪಿದ ಘಟನೆ ತಮಿಳುನಾಡು ವಿರುದುನಗರದ ವೆಂಬಕೊಟ್ಟೈ ಬಳಿಯ ರಾಮುತೇವನಪಟ್ಟಿಯಲ್ಲಿರುವ ಖಾಸಗಿ ಪಟಾಕಿ ತಯಾರಿಕಾ ಕಾರ್ಖಾನೆಯಲ್ಲಿ ಇಂದು ನಡೆದಿದೆ.
ಘಟನೆಯಲ್ಲಿ ಹಲವಾರು ಮಂದಿ ಗಾಯಗೊಂಡಿದ್ದು, ತೀವ್ರ ಸುಟ್ಟಗಾಯಗಳಿಂದ ಬಳಲುತ್ತಿದ್ದ ಕಾರ್ಮಿಕರನ್ನು ಶಿವಕಾಶಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಇನ್ನು ಸ್ಪೋಟಕ್ಕೆ ಕಾರಣವೇನು ಎಂಬುದರ ಬಗ್ಗೆ ಯಾವುದೇ ಮಾಹಿತಿ ತಿಳಿದುಬಂದಿಲ್ಲ ಎನ್ನಲಾಗಿದೆ.
ಪಟಾಕಿ ಕಾರ್ಖಾನೆಯ ಒಳಗೆ ಸಿಲುಕಿರುವವರನ್ನು ರಕ್ಷಣೆ ಮಾಡಲಾಗುತ್ತಿದೆ. ಸ್ಪೋಟದ ಪರಿಣಾಮ ಸುಮಾರು 3 ಕಟ್ಟಡಗಳು ನೆಲಸಮವಾಗಿವೆ. ಇನ್ನು ಸ್ಫೋಟದ ನಂತರ ಪಟಾಕಿ ತಯಾರಿಕಾ ಕಾರ್ಖಾನೆ ಹೊತ್ತಿ ಉರಿದಿದ್ದು, ಕಾರ್ಖಾನೆಯ ಬೆಂಕಿ ನಂದಿಸಲು ಪೊಲೀಸರು, ಅಗ್ನಿಶಾಮಕ ಸಿಬ್ಬಂದಿಗಳು ಆಗಮಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.




