ಬಂಟ್ವಾಳ: MDMA ಮಾದಕವಸ್ತು ಸೇವನೆ, ಮಾರಾಟ: ಸೊತ್ತು ಸಹಿತ ಇಬ್ಬರು ಆರೋಪಿಗಳ ಬಂಧನ
ಬಂಟ್ವಾಳ: MDMA ನಿದ್ರಾಜನಕ ಮಾದಕವಸ್ತುವನ್ನು ಸೇವನೆ, ಮಾರಾಟದ ಆರೋಪದಡಿ ಸೊತ್ತು ಸಹಿತ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಮಂಚಿ ಗ್ರಾಮದ ನಿವಾಸಿ, ಮೋಟಾರ್ ಸೈಕಲ್ ಸವಾರ ಅಬ್ದುಲ್ ರಹೀಜ್ (23), ಸಹಸವಾರ ದಾವುದುಲ್ ಅಮೀರ್ (26) ಬಂಧಿತ ಆರೋಪಿಗಳು. ಮಂಚಿ ಗ್ರಾಮದ ಕುಕ್ಕಾಜೆ ನಿವಾಸಿ ನಝೀರ್ ಎಂಬಾತ ಸ್ಥಳದಿಂದ ಪರಾರಿಯಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳಿಂದ ಮಾರಾಟಕ್ಕಾಗಿ ಸಾಗಿಸುತ್ತಿದ್ದ ಸುಮಾರು 4,000/- ರೂಪಾಯಿ ಮೌಲ್ಯದ ಒಟ್ಟು 4 ಗ್ರಾಮ್ 04 ಮಿ.ಗ್ರಾಂ ತೂಕದ ನಿದ್ರಾಜನಕ MDMA ಅನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ವಿವರ: ದಿನಾಂಕ: 07.02.2024 ರಂದು ಮಧ್ಯಾಹ್ನ, ರಾಮಕೃಷ್ಣ ಪೊಲೀಸ್ ಉಪನಿರೀಕ್ಷಕರು (ಕಾ&ಸು) ಬಂಟ್ವಾಳ ನಗರ ಪೊಲೀಸ್ ಠಾಣೆರವರು ಸಿಬ್ಬಂದಿಗಳೊಂದಿಗೆ, ಬಂಟ್ವಾಳ ತಾಲೂಕು ಕಳ್ಳಿಗೆ ಗ್ರಾಮದ ಬ್ರಹ್ಮರಕೋಟ್ಲು ಎಂಬಲ್ಲಿ, ವಾಹನ ತಪಾಸಣೆಗಾಗಿ ಒರ್ವ ಸವಾರ ಹಾಗೂ ಇಬ್ಬರು ಸಹಸವಾರರನ್ನು ಕುಳ್ಳಿರಿಸಿಕೊಂಡು ನಂಬರ್ ಪ್ಲೇಟ್ ಇಲ್ಲದ ಮೋಟಾರ್ ಸೈಕಲನ್ನು ನಿಲ್ಲಿಸಲು ಸೂಚಿಸಿದ್ದಾರೆ.
ಮೋಟಾರ್ ಸೈಕಲಿನಲ್ಲಿದ್ದ ಸಹ ಸವಾರರಿಬ್ಬರ ಪೈಕಿ, ಓರ್ವ ಸಹ ಸವಾರನು ಮೋಟಾರ್ ಸೈಕಲಿನಿಂದ ಇಳಿದು ಓಡಿ ಹೋಗಿದ್ದು. ಮೋಟಾರ್ ಸೈಕಲ್ ಸವಾರ ಅಬ್ದುಲ್ ರಹೀಜ್ (23), ಮಂಚಿ ಗ್ರಾಮ, ಬಂಟ್ವಾಳ ಹಾಗೂ ಸಹಸವಾರ ದಾವುದುಲ್ ಅಮೀರ್ (26), ಮಂಚಿ ಗ್ರಾಮ, ಬಂಟ್ವಾಳ ಎಂಬವರನ್ನು ವಿಚಾರಿಸಲಾಗಿ, ಅವರುಗಳು MDMA ನಿದ್ರಾಜನಕ ಮಾದಕವಸ್ತುವನ್ನು ಸೇವನೆ ಮಾಡಿರುವುದು ತಿಳಿದುಬಂದಿದೆ.
ಸದ್ರಿ ವಾಹನವನ್ನು ತಪಾಸಣೆ ನಡೆಸಲಾಗಿ, ಅದರಲ್ಲಿ ಆರೋಪಿಗಳು ಮಾರಾಟಕ್ಕಾಗಿ ಸಾಗಿಸುತ್ತಿದ್ದ ಸುಮಾರು 4,000/- ರೂಪಾಯಿ ಮೌಲ್ಯದ ಒಟ್ಟು 4 ಗ್ರಾಮ್ 04 ಮಿ.ಗ್ರಾಂ ತೂಕದ ನಿದ್ರಾಜನಕ MDMA ದೊರಕಿರುತ್ತದೆ.
ಮುಂದಿನ ಕಾನೂನುಕ್ರಮಕ್ಕಾಗಿ ಸದ್ರಿ ಮಾದಕವಸ್ತು, ಮೋಟಾರ್ ಸೈಕಲ್ ಹಾಗೂ ಆರೋಪಿ ಅಬ್ದುಲ್ ರಹೀಜ್ ಎಂಬಾತನ ಸ್ವಾಧೀನದಲ್ಲಿದ್ದ ಮೊಬೈಲ್ ಪೋನನ್ನು ಸ್ವಾಧೀನಪಡಿಸಲಾಗಿದೆ.
ಆರೋಪಿಗಳಾದ ಬೈಕ್ ಸವಾರ, ಸಹಸವಾರ ಹಾಗೂ ಓಡಿಹೋಗಿದ್ದ ಕುಕ್ಕಾಜೆ, ಬಂಟ್ವಾಳ ನಿವಾಸಿ ನಝೀರ್ ಎಂಬವರುಗಳ ವಿರುದ್ದ ಬಂಟ್ವಾಳ ನಗರ ಠಾಣೆಯಲ್ಲಿ ಅ.ಕ್ರ 36/2024 ಕಲಂ: 8(C), 22(b) NDPS Act 1985 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.




