ತಮಿಳುನಾಡು: ರೈಲಿನಡಿ ಸಿಲುಕಿ ಮೂರು ಆನೆಗಳು ಮೃತ್ಯು
ಕೊಯಮತ್ತೂರ್: ಒಂದು ಹೆಣ್ಣಾನೆ ಮತ್ತು ಅದರ ಎರಡು ಪುಟ್ಟ ಹೆಣ್ಣು ಮರಿಗಳು ರೈಲು ಡಿಕ್ಕಿ ಹೊಡೆದು ಮೃತಪಟ್ಟ ಹೃದಯವಿದ್ರಾವಕ ಘಟನೆ ಶುಕ್ರವಾರ ರಾತ್ರಿ ತಮಿಳುನಾಡು-ಕೇರಳದ ಗಡಿಯಾದ ನವಕ್ಕರೈ ಸಮೀಪದ ಮಾವುತ್ತಂಪತ್ತಿ ಗ್ರಾಮದ ಬಳಿ ನಡೆದಿದೆ.
ತಾಯಿ ಆನೆಗೆ ಸುಮಾರು 25 ವರ್ಷವಾಗಿರಬಹುದು ಹಾಗೂ ಮರಿಗಳಿಗೆ 12 ವರ್ಷ ಆಗಿದೆ ಎಂದು ಸ್ಥಳೀಯ ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಶುಕ್ರವಾರ ರಾತ್ರಿ 9.05ರ ಹೊತ್ತಿಗೆ ಮಹೀಂದ್ರಾಮೇಡು ಎಂಬಲ್ಲಿ, ಮಂಗಳೂರು-ಚೆನ್ನೈ ಎಕ್ಸ್ ಪ್ರೆಸ್ ರೈಲಿಗೆ ಈ ಆನೆಗಳು ಬಲಿಯಾಗಿವೆ. ರೈಲಿಗೆ ಸಿಲುಕಿದ ಈ ಆನೆಗಳು ಹಳಿಯ ಮೇಲೆ ಕೆಲವು ಮೀಟರ್ಗಳಷ್ಟು ದೂರ ಎಳೆಯಲ್ಪಟ್ಟಿವೆ.
ಆನೆಗಳು ಮೃತಪಟ್ಟ ಸುದ್ದಿ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ಮಾಡಿದ್ದಾರೆ. ರಾತ್ರಿ ಕತ್ತಲಿದ್ದರೂ ಆನೆಯ ಮೃತದೇಹಗಳನ್ನು ಹಳಿಯ ಮೇಲಿಂದ ತೆಗೆಯಲಾಗಿದ್ದು, ಇಂದು ಪೋಸ್ಟ್ಮಾರ್ಟಮ್ ಮಾಡಲಾಗುವುದು ಎಂದು ಅರಣ್ಯ ಇಲಾಖೆ ಮಾಹಿತಿ ನೀಡಿದೆ. ಘಟನೆಯ ಪ್ರಾಥಮಿಕ ತನಿಖೆ ನಡೆಸಲು ಜಿಲ್ಲಾ ಅರಣ್ಯಾಧಿಕಾರಿ ಟಿ.ಕೆ.ಅಶೋಕ್ ಕುಮಾರ್ ಸೇರಿ ಇಲಾಖೆಯ ಇತರ ಉನ್ನತ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. ಹಾಗೇ, ರೈಲಿನ ಲೋಕೋ ಪೈಲಟ್ ನೀಡಿದ ಮಾಹಿತಿ ಅನ್ವಯ ರೈಲ್ವೆ ಪೊಲೀಸರೂ ಕೂಡ ಸ್ಥಳಕ್ಕೆ ತೆರಳಿದ್ದಾರೆ.
ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳೀಯರು ಕೂಡ ಆನೆಗಳ ಮೃತದೇಹ ನೋಡಲು ಸ್ಥಳಕ್ಕೆ ಧಾವಿಸುತ್ತಿದ್ದಾರೆ. ಮೂಕಪ್ರಾಣಿಗಳ ಸಾವಿಗೆ ಬೇಸರ ವ್ಯಕ್ತಪಡಿಸಿದ್ದಾರೆ.