ಮೌನಿಯಾಗಿದ್ದೇನೆ – ಮೂಕನಾಗಲಿಲ್ಲ: ವಿಶೇಷ ವರದಿ: ರಾಧಾಕೃಷ್ಣ ಎರುಂಬು
ಪ್ರಥಮ ಯೋಚನೆಯ ನಿಮ್ಮ ಉತ್ತರ ಹಲವು ಬಾರಿ ನಿಮ್ಮನ್ನು ವಿನಾ ಕಾರಣ ಪೇಚಿಗೆ ಸಿಲುಕಿಸುತ್ತದೆ. ಉತ್ತರ ಬೇಗ ಹೊಳೆಯುತ್ತದೆ ಆದರೆ ಸಿಕ್ಕಾಪಟ್ಟೆ ಕ್ರೂರವಾಗಿರುತ್ತದೆ. ಹೀಗೆಂದು ತಜ್ಞರು ಹೇಳುತ್ತಾರೆ. ಕೆಲವೊಮ್ಮೆ ನಮಗನಿಸುವುದುಂಟು ಕೆಲವರ ಉತ್ತರಕ್ಕೆ ದಿನ ಕಾಯಬೇಕೆಂದು, ಆದರೆ ಸರಿಯಾದ ಉತ್ತರಕ್ಕೆ ಅಷ್ಟೊಂದು ತಡಕಾಡಿದ್ದಾರೆ ಎಂದರ್ಥವಲ್ಲ. ನಾಳೆಗೆ ಸಮಸ್ಯೆಯಾಗದಿರಲೆಂದು ಯೋಚಿಸಿದ್ದಾರೆ ಎಂದು ಅರ್ಥೈಸಬಹುದು. ಮಾತು ಮುತ್ತಿನಂತೆ, ಬಿರುಕಾಗಿಸದಿದ್ದರೆ ಒಳಿತು. ಇದೇ ತಾಳ್ಮೆ ಎಂದರೂ ಸರಿ. ಹಲವು ಬಾರಿ ತಡವಾದ ಇತರರ ಉತ್ತರ ನಮ್ಮ ವೇಗದ ಕಾರ್ಯಕ್ಕೆ ತಡೆಯಾಗುತ್ತದೆ ಎಂದನಿಸುತ್ತದೆಯಾದರೂ ವಾಸ್ತವಿಕತೆಯಲ್ಲಿ ಅದರಲ್ಲಿ ಸತ್ವವಿರುತ್ತದೆ.. ಹಾಗಲಕಾಯಿ ಕಹಿಯಾದರೂ ಆರೋಗ್ಯಕ್ಕೆ ಒಳ್ಳೇದು.
ಒಮ್ಮೊಮ್ಮೆ ಮೌನಿಯಾಗಿರೋಣವೆಂಬ ಭಾವ ಮೂಡುತ್ತದೆ, ಆದರೆ ಮೂಕನಷ್ಟಲ್ಲ. ಭಯವಿದೆ ನನಗೆ ನನ್ನ ಅತಿ ಮೌನ ಮೂಕನನ್ನಾಗಿಸಬಹುದೇ ಎಂದು. ಹೆಪ್ಪುಗಟ್ಟಿದ ನೋವಿಗೆ ತಡೆಯಾದ ಮೌನ ಆರೋಗ್ಯ ಹದಗೆಡಿಸಬಹುದೇ ಎಂದೆಲ್ಲ. ಚಿಂತೆಯ ಚಿಂತನಕ್ಕೆ ಮೌನ ಅಡ್ಡಿಯೇ ಹೌದು. ತಾಳಲಾರದ ನೋವನ್ನು ಹೇಳಲಾಗದೆ ಬದುಕು ಕಳೆದುಕೊಂಡ ದುರಂತಗಳಿವೆ. ಆದರೆ ದುಮ್ಮಿಕ್ಕಿ ಬರುವ ಕೆಟ್ಟ ಯೋಚನೆಗಳಿಗೆ ಕಾರ್ಯೋಣ್ಮುಖರಾಗುವುದೂ ಒಂದರ್ಥದಲ್ಲಿ ದುರಂತವೆ. ಮೌನಿಯಾಗುವುದು ಅನುಭವವೇದ್ಯ ವ್ಯಕ್ತಿತ್ವದ ಒಂದು ಲಕ್ಷಣ ಅನ್ನುತ್ತಾರೆ, ಆದರೆ ಬದುಕಿನ ಕೆಲವು ಘಟನೆಗಳು ನಿಮ್ಮನ್ನು ಮೌನಿಯಾಗಿಸುವುದು ಬೇರೆ.
ಈಗೀಗ ನಾನು ಮೌನಿಯಾಗಿದ್ದೇನೆ . ನನಗೆ ಮೌನಿಯಾಗಿರುವುದು ಆರಾಮದಾಯಕ ಎಂದೆನಿಸಿದೆ, ಜಿಗುಪ್ಸೆಯಿಂದಲ್ಲ. ನನಗೆ ಬರುತಿದ್ದ ಪ್ರಥಮ ಯೋಚನೆಗೆ ಉತ್ತರಿಸಿ ಉತ್ತರಿಸಿ, ಆದ ಆಘಾತಗಳೆ ನನ್ನನ್ನು ಮೌನದತ್ತ ದೂಡಿದೆ. ಇದರಿಂದ ನನ್ನ ಯೋಚನೆಯ, ಕಾಯಕದ ಸಾಮರ್ಥ್ಯ ಹೆಚ್ಚಿಸಿದೆ.ಆದರೂ ಒಮ್ಮೊಮ್ಮೆ ತಾಳ್ಮೆಯ ಕಟ್ಟೆಯೊಡೆದು ಬರುವ ಆಲೋಚಗಳು ನನ್ನ ಮೌನ ವೃತಕ್ಕೆ ಭಂಗ ತರುತ್ತಿದೆ. ಹುಟ್ಟುಗುಣ ಹಾಗೇ ನೋಡಿ, ಪಲ್ಲಕ್ಕಿಯಲ್ಲಿಟ್ಟರೂ ಇಣುಕಿ ನೋಡದೆ ಬಿಡದು. ಸರಿಯಾಗಿ ಸುಡುವ ಪ್ರಯತ್ನ ಆಗಲೇ ಬೇಕು.
ಅಧ್ಯಾಪನದಲ್ಲಿ ಈ ಮೌನ ಅತಿ ಅಗತ್ಯ, ನೂರು ಕೇಳಿ ಒಂದು ಉತ್ತರ ಕೊಟ್ಟರೂ ಸರಿಯೇ. ಕೆಲವೊಮ್ಮೆ ನಿಮ್ಮ ಪ್ರಥಮ ಯೋಚನೆಯ ಉತ್ತರ ಮುಗ್ಧ ಮನಸುಗಳ ಹೊಸ ಬೆಳವಣಿಗೆಯ ಯೋಚನೆಗಳಿಗೆ ಘಾಸಿ ಮಾಡಬಹುದು. ಮತ್ತೆ ಆ ಮಗು ನಿಮ್ಮ ಸಣ್ಣ ಅವಾಂತರದಿಂದ ಯೋಚನೆಯನ್ನೇ ನಿಲ್ಲಿಸಬಹುದು. ಈ ಕೃತ್ಯ ಎಸಗುತ್ತೀರಾ? ಎಸಗಿದರೆ ದೇವರ ಕ್ಷಮೆ ಇಲ್ಲದ ಕಟಕಟೆಯಲ್ಲಿ ನಿಲ್ಲಬೇಕಾಗುತ್ತದೆ ನೀವು.
ಸಂಸಾರದಲ್ಲಿ ಸಾರವಿಲ್ಲದ ಸಸಾರ ಬದುಕು ಬದುಕಬೇಕಾಗುತ್ತದೆ ನಿಮ್ಮ ತುಮುಲದ ಉತ್ತರದಿಂದ. ಸರಳವಾಗಿ ಕೋಪಿಷ್ಟನೆಂಬ ಪದವಿಗೇರಬೇಕಾಗುತ್ತದೆ. ಎಲ್ಲರೂ ಗೊರಕೆ ಹೊಡೆಯುವ ಸವಿ ಸಮಯದಲ್ಲಿ ಮೂಕರೋಧನ ನಿಮ್ಮದಾಗಬೇಕಾಗುತ್ತದೆ. ಆ ಒಂದು ಕ್ಷಣದ ಉತ್ತರ ಬಿಗಿಯಾಗಿ ಅದುಮಿಟ್ಟು ಕೊಳ್ಳಬಾರದೆ ನಿಷ್ಠುರನಾಗುವ ಮೊದಲೇ?
ಇದೆಲ್ಲದರ ಪರಿವೆ ಬಂದ ಈ ದಿನ ನಾನು ಮೌನಿಯಾಗಲು ತೊಡಗಿದೆ, ಆದರೆ ಮೂಕನಾಗಲಿಲ್ಲ. ಸಾಕು ಇನ್ನು ಸಾಕೆನಿಸಿದೆ ಮೊದಲ ಉತ್ತರದ ಸಹವಾಸ.
ನೀವು ಬರುವಿರಾ ನನ್ನ ಜೊತೆಗೆ……..




