ಜ.27ರಿಂದ ಮೇ 31ರವರೆಗೆ ವಿಮಾನ ಹಾರಾಟದ ವೇಳಾಪಟ್ಟಿಯಲ್ಲಿ ಬದಲಾವಣೆ
ಮಂಗಳೂರು: ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಎಂಐಎ) ರನ್‌ವೇಯ ನವೀಕರಣ ಕಾಮಗಾರಿ ನಡೆಯಲಿದ್ದು, ಜ.27ರಿಂದ ಮೇ 31ರವರೆಗೆ ವಿಮಾನ ಹಾರಾಟದ ವೇಳಾಪಟ್ಟಿ ಮಾರ್ಪಾಡು ಆಗಲಿದೆ.
ಭಾನುವಾರ ಹಾಗೂ ರಾಷ್ಟ್ರೀಯ ರಜಾದಿನಗಳನ್ನು ಹೊರತುಪಡಿಸಿ, ಸೋಮವಾರದಿಂದ ಶನಿವಾರದವರೆಗೆ ಬೆಳಿಗ್ಗೆ 9.30ರಿಂದ ಸಂಜೆ 6 ಗಂಟೆವರೆಗೆ ರನ್ ವೇ ನವೀಕರಣ ಕಾಮಗಾರಿ ನಡೆಯಲಿದೆ. ಹಾಗಾಗಿ ಈ ಅವಧಿಯಲ್ಲಿ ವಿಮಾನಗಳು ಬೆಳಿಗ್ಗೆ 9.30ಕ್ಕಿಂತ ಮುನ್ನ ಹಾಗೂ ಸಂಜೆ 6 ಗಂಟೆಯ ನಂತರ ವಿಮಾನಗಳು ಕಾರ್ಯಾಚರಿಸಲಿವೆ.
2,450 ಮೀ. ಉದ್ದದ ಹಾಗೂ 45 ಮಿ ಅಗಲದ ಕಾಂಕ್ರೀಟ್ ರನ್‌ವೇಯನ್ನು 2006ರ ಮೇ ತಿಂಗಳಲ್ಲಿ ಲೊಕಾರ್ಪಣೆಗೊಳಿಸಲಾಗಿತ್ತು. ಈ ಮೂಲಕ ಕಾಂಕ್ರೀಟ್ ರನ್‌ವೇಯನ್ನು ಹೊಂದಿರುವ ಹಾಗೂ ಎರಡೆರಡು ರನ್‌ವೇಗಳನ್ನು ಹೊಂದಿರುವ ರಾಜ್ಯದ ಮೊದಲ ವಿಮಾನನಿಲ್ದಾಣ ಎಂಬ ಹೆಗ್ಗಳಿಕೆಗೆ ಎಂಐಎ ಪಾತ್ರವಾಗಿತ್ತು.
ಈ ರನ್‌ವೇಯ ದುರಸ್ತಿ ಹಾಗೂ ನಿರ್ವಹಣೆ ಕಾರ್ಯವನ್ನು ಕಾಲಕಾಲಕ್ಕೆ ನಡೆಸಲಾಗುತ್ತಿದೆ. ನಾಗರಿಕ ವಿಮಾನಯಾನ ನಿರ್ದೇಶನಾಲಯವು ನಿಗದಿಪಡಿಸಿದ ಗುಣಮಟ್ಟಕ್ಕೆ ತಕ್ಕುದಾಗಿ ರನ್‌ವೇ ಡಾಂಬರೀಕರಣ ನಡೆಸಲು ಪ್ರಸ್ತುತ ನವೀಕರಣ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದೆ.




