March 20, 2026

ಉಡುಪಿ: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಬ್ಯಾಗ್‌ನಲ್ಲಿದ್ದ 40 ಲಕ್ಷ ರೂ.ಮೌಲ್ಯದ ಚಿನ್ನಾಭರಣ ಕಳವು

0
image_editor_output_image-949365079-1670400839818.jpg

ಉಡುಪಿ: ಮುಂಬಯಿಯಿಂದ ಉಡುಪಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರ ಬ್ಯಾಗ್‌ನಲ್ಲಿದ್ದ 40 ಲ.ರೂ.ಮೌಲ್ಯದ ಚಿನ್ನಾಭರಣ ಮತ್ತು ಡೈಮಂಡ್ ಆಭರಣಗಳು ಕಳವಾದ ಘಟನೆ ನಡೆದಿದೆ. ದೀಪಾ ರೈ(44) ಚಿನ್ನಾಭರಣ ಕಳೆದುಕೊಂಡ ಮಹಿಳೆಯಾಗಿದ್ದಾಳೆ.

ಮಹಾರಾಷ್ಟ್ರದ ಮುಲುಂದು ವೈಶಾಲಿ ನಗರದ ದೀಪಾ ರೈ ಅವರು ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಕಟಪಾಡಿಯಲ್ಲಿರುವ ತಮ್ಮ ಮನೆಗೆ ಡಿ.5ರಂದು ಅಕ್ಕ, ಭಾವ, ಅಮ್ಮ ಹಾಗೂ ತಂದೆಯೊಂದಿಗೆ ಮುಂಬಯಿಯ ಪನ್ವೇಲಿನಿಂದ ಮತ್ಸ್ಯಗಂಧ ರೈಲಿನಲ್ಲಿ ಹೊರಟಿದ್ದರು.

ಈ ವೇಳೆ ತಮ್ಮ ಚಿನ್ನಾಭರಣಗಳನ್ನು 3 ಬ್ಯಾಗ್‌ಗಳಲ್ಲಿ ಇರಿಸಿ, ಸೀರೆಯ ಮಧ್ಯಭಾಗದಲ್ಲಿ ಇಟ್ಟುಕೊಂಡಿದ್ದರು.

ಡಿ.6ರಂದು ಬೆಳಗ್ಗೆ ಸುಮಾರು 5 ಗಂಟೆಗೆ ರೈಲು ಕುಂದಾಪುರ ಸ್ಟೇಷನ್ ತಲುಪಿದ್ದು, ಉಡುಪಿಯಲ್ಲಿ ಇಳಿಯುವುದಕ್ಕೆ ಇವರು ಬ್ಯಾಗ್ ಗಳನ್ನು ರೈಲಿನ ಬಾಗಿಲಿನ ಬಳಿ ತಂದು ಇರಿಸಿದ್ದರು.

ರೈಲು ಮುಂಜಾನೆ 5.40 ಗಂಟೆಗೆ ಉಡುಪಿಯ ರೈಲು ಸ್ಟೇಷನ್ ಗೆ ಬಂದಿದ್ದು, ಬಳಿಕ ರೈಲಿನಿಂದ ಇಳಿದು ಕಟಪಾಡಿಯ ಮನೆಗೆ ಹೋಗಿ ಬ್ಯಾಗ್ ಪರಿಶೀಲಿಸಿದಾಗ 3 ಬ್ಯಾಗ್ ನಲ್ಲಿಟ್ಟಿರುವ ಚಿನ್ನಾಭರಣಗಳು ಮತ್ತು ಡೈಮಂಡ್ ಆಭರಣಗಳು ಕಳವಾಗಿರುವುದು ಕಂಡು ಬಂದಿದೆ.

ಕಳವಾಗಿರುವ ಚಿನ್ನಾಭರಣಗಳ ಅಂದಾಜು ತೂಕ 850 ಗ್ರಾಂ ಆಗಿದ್ದು, ಒಟ್ಟು ಮೌಲ್ಯ 34 ಲಕ್ಷ ರೂ. ಆಗಬಹುದು ಹಾಗೂ ಕಳವಾದ ಡೈಮಂಡ್ ನ ಮೌಲ್ಯ 6 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

ಇವುಗಳ ಒಟ್ಟು ಮೌಲ್ಯ ಸುಮಾರು 40 ಲಕ್ಷ ರೂ. ಆಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!