March 20, 2026

ಮದುವೆ ಮಂಟಪದಲ್ಲೇ ಕುಸಿದು ಬಿದ್ದು ವಧು ಸಾವು: ಸಂಭ್ರಮದಲ್ಲಿದ್ದ ಕುಟುಂಬದಲ್ಲಿ ಸೂತಕ ಛಾಯೆ

0
IMG-20221204-WA0017.jpg

ಲಕ್ನೋ: ಲಕ್ನೋದ ಮಲಿಹಾಬಾದ್‌ನಲ್ಲಿ ವಿವಾಹ ಮಂಟಪದಲ್ಲಿ ಹಾರ ಬದಲಾಯಿಸಿಕೊಂಡ ಫೋಟೋ ತೆಗೆಸಿಕೊಳ್ಳುತ್ತಿದ್ದ ವೇಳೆ ವಧು ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದ್ದು, ಸಂಭ್ರಮದಲ್ಲಿದ್ದ ಕುಟುಂಬದಲ್ಲಿ ಸೂತಕ ಛಾಯೆ ಆವರಿಸಿದೆ.

ರಾಜ್‌ಪಾಲ್ ಎಂಬವರ ಪುತ್ರಿ ಶಿವಾಂಗಿ ಶರ್ಮಾ (21 ) ಮೃತಪಟ್ಟವರು.

ಲಕ್ನೋ ಹೊರವಲಯದಲ್ಲಿರುವ ಮಲಿಹಾಬಾದ್‌ನ ಭದ್ವಾನಾ ಗ್ರಾಮದಲ್ಲಿ ಶುಕ್ರವಾರ ಸಂಜೆ ನಡೆದ ಮದುವೆ ವೇಳೆ ಈ ದುರ್ಘಟನೆ ಸಂಭವಿಸಿದೆ. ಪ್ರಾಥಮಿಕ ವರದಿಗಳ ಪ್ರಕಾರ ವಧುವಿಗೆ ಹೃದಯಸ್ತಂಭನವಾಗಿದೆ ಎನ್ನಲಾಗಿದೆ.

ವಿವಾಹದ ವಿಧಿವಿಧಾನಗಳು ನಡೆದ ಬಳಿಕ ವಧು-ವರರು ಹೂಹಾರ ಬದಲಾಯಿಸಿಕೊಂಡು ವಧು-ವರರಿಬ್ಬರು ಫೋಟೋ ತೆಗೆಸಿಕೊಳ್ಳುತ್ತಿದ್ದರು. ಈ ವೇಳೆ ವೇದಿಕೆಯ ಮೇಲಿದ್ದ ವಧು ಒಮ್ಮೆಲೆ ಕುಸಿದು ಬಿದ್ದಿದ್ದಾಳೆ. ಕೂಡಲೇ ಆಕೆಯನ್ನು ಸಮೀಪದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಬಳಿಕ ಟ್ರಾಮಾ ಕೇಂದ್ರಕ್ಕೆ ಸಾಗಿಸಲಾಯಿತು. ಆದರೆ ಈ ವೇಳೆ ಮಾರ್ಗ ಮಧ್ಯದಲ್ಲೇ ಆಕೆ ಮೃತಪಟ್ಟಳು.

ವಧು ಸುಮಾರು ಹದಿನೈದು ದಿನದಿಂದ ಅನಾರೋಗ್ಯದಿಂದ ಬಳಲುತ್ತಿದ್ದಳು. ರಕ್ತದೊತ್ತಡ ಕಡಿಮೆಯಾಗಿದ್ದು, ಆಕೆಗೆ ಹೃದಯಸ್ತಂಭನವಾಗಿದೆ ಎಂದು ವೈದ್ಯರು ತಿಳಿಸಿರುವುದಾಗಿ ವರದಿಯಾಗಿದೆ. ಶನಿವಾರ ಆಕೆಯ ಅಂತ್ಯಕ್ರಿಯೆ ನಡೆಸಲಾಯಿತು.

Leave a Reply

Your email address will not be published. Required fields are marked *

error: Content is protected !!