September 8, 2024

ಕಾಸರಗೋಡು: ಅಪರೂಪದಲ್ಲಿ ಅಪರೂಪ: ಅತ್ಯಾಚಾರ ಆರೋಪಿ ಮಲ ತಂದೆಗೆ 107 ವರ್ಷ ಸೆರೆವಾಸ

0

ಕಾಸರಗೋಡು: ಹದಿನಾರು ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲತಂದೆಗೆ ಅಪರೂಪದಲ್ಲಿ ಅಪರೂಪ ಎಂಬಂತೆ ಶಿಕ್ಷೆ ಘೊಷಣೆಯಾಗಿದೆ. ವಿವಿಧ ಸೆಕ್ಷನ್‌ಗಳಲ್ಲಾಗಿ ಒಟ್ಟು 107 ವರ್ಷ ಸಜೆ ಹಾಗೂ 4,25,000 ರೂ. ದಂಡ ವಿಧಿಸಿ ಹೊಸದುರ್ಗ ಒಂದನೇ ಹೆಚ್ಚುವರಿ ಜಿಲ್ಲಾ ಸೆಶನ್ಸ್‌ ನ್ಯಾಯಾಲಯ ತೀರ್ಪು ನೀಡಿದೆ.

ಮೂಲತಃ ಇಡುಕ್ಕಿ ನಿವಾಸಿ ಹಾಗೂ ಈಗ ಉದುಮ ಬಾರದ ಕುಳಿಕುನ್ನಿಲ್‌ನಲ್ಲಿ ಆರೋಪಿ ವಾಸವಾಗಿದ್ದ ಎಂದು ತಿಳಿದು ಬಂದಿದೆ. 376(3), 376(2), (ಎನ್‌), 376(2)(ಎಫ್‌), ಐಪಿಸಿ ಆ್ಯಂಡ್‌ ಆರ್‌ ಡಬ್ಲ್ಯು 5(1), 6-ಆರ್‌/ಡಬ್ಲ್ಯು 5(ಎನ್‌) ಪ್ರಕಾರದ ಐದು ಸೆಕ್ಷನ್‌ಗಳಡಿ ಆರೋಪಿಗೆ ತಲಾ 20 ವರ್ಷದಂತೆ ಸಜೆ ಹಾಗೂ 75,000 ರೂ. ದಂಡ ವಿಧಿಸಿದೆ ತೀರ್ಪು ಪ್ರಕಟಿಸಲಾಗಿದೆ. ದಂಡ ಪಾವತಿಸದಿದ್ದಲ್ಲಿ ಆರು ತಿಂಗಳ ಹೆಚ್ಚುವರಿ ಸಜೆ ಅನುಭವಿಸಬೇಕಾಗಿದೆ.

ಮಾತ್ರವಲ್ಲದೆ ಪೋಕ್ಸೋ ಕಾನೂನು ಪ್ರಕಾರ ಆರೋಪಿಗೆ ಏಳು ವರ್ಷ ಸಜೆ ಹಾಗೂ 50,000 ರೂಪಾಯಿ ದಂಡ ವಿಧಿಸಲಾಗಿದೆ. ದಂಡ ಪಾವತಿಸದಿದ್ದಲ್ಲಿ ಮೂರು ತಿಂಗಳ ಹೆಚ್ಚುವರಿ ಸಜೆ ಅನುಭವಿಸಬೇಕಾಗಿದೆ.

2012ರಿಂದ 2018ರ ಅವಧಿಯಲ್ಲಿ ಬಾಲಕಿಗೆ ಹಲವು ಬಾರಿ ಲೈಂಗಿಕ ಕಿರುಕುಳ ನೀಡಿದ್ದನೆಂಬ ದೂರಿನಂತೆ ಬಾಲಕಿಯ ಮಲತಂದೆಯ ವಿರುದ್ಧ ಮೇಲ್ಪರಂಬ ಪೊಲೀಸರು ಕೇಸು ದಾಖಲಿಸಿದ್ದರು.
ಲೈಂಗಿಕ ಕಿರುಕುಳ ನೀಡಿದ ಪ್ರಕರಣವೊಂದಕ್ಕೆ ಸಂಬಂಧಿಸಿ ಕೇರಳ ರಾಜ್ಯದಲ್ಲೇ ನೀಡಲಾದ ಅತೀ ದೊಡ್ಡ ಶಿಕ್ಷೆಯಾಗಿದೆ.

Leave a Reply

Your email address will not be published. Required fields are marked *

error: Content is protected !!