ಮಂಗಳೂರು: ಲಾರಿ ಮೇಲೆ ಉರುಳಿ ಬಿದ್ದ ಭಾರೀ ಗಾತ್ರದ ಮರ
ಮಂಗಳೂರು: ನಗರದಲ್ಲಿ ತಡರಾತ್ರಿ ಸುರಿದ ಧಾರಾಕಾರ ಮಳೆಯ ಪರಿಣಾಮ ಬುಧವಾರ ಬೆಳಗ್ಗೆ ರೊಝಾರಿಯೋ ರಸ್ತೆಯಲ್ಲಿ ಭಾರೀ ಗಾತ್ರದ ಮರ ಲಾರಿ ಮೇಲೆ ಉರುಳಿ ಬಿದ್ದಿದ್ದು, ಲಾರಿ ಚಾಲಕ ಪವಾಡಸದೃಶ ರೀತಿಯಲ್ಲಿ ಪಾರಾಗಿದ್ದಾರೆ.
ನಗರದಲ್ಲಿ ತಡರಾತ್ರಿ ಗುಡುಗು, ಸಿಡಿಲು ಸಹಿತ ಧಾರಾಕಾರ ಮಳೆಯಾಗಿತ್ತು. ಮಳೆಯ ಪರಿಣಾಮ ರೊಝಾರಿಯೋ ರಸ್ತೆಯಲ್ಲಿದ್ದ ಬಿಎಸೆನ್ನೆಲ್ ಕಂಪೌಂಡ್ ಆವರಣದಿಂದ ಕಂಪೌಂಡ್ ವಾಲ್ ಸಮೇತ ಭಾರೀ ಗಾತ್ರದ ಮರ ಬುಡ ಸಮೇತ ಉರುಳಿ ರಸ್ತೆ ಬದಿ ನಿಲ್ಲಿಸಲಾಗಿದ್ದ ಲಾರಿ ಮೇಲೆ ಬಿದ್ದಿದೆ.
ಲಾರಿಯಲ್ಲಿದ್ದ ಚಾಲಕ ಪುರುಷೋತ್ತಮ ಅವರು ಮರ ಬೀಳುತ್ತಿರುವ ಸದ್ದು ಕೇಳಿ ತತ್ ಕ್ಷಣ ಎಚ್ಚೆತ್ತುಕೊಂಡು ಲಾರಿಯಿಂದ ರಸ್ತೆಗೆ ಹಾರಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಲಾರಿಗೆ ಭಾರೀ ಹಾನಿಯಾಗಿದೆ.




