ಕೋಲಾರ: 9ನೇ ತರಗತಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ-ಪೋಕ್ಸೋ ಪ್ರಕರಣ ದಾಖಲು
ಕೋಲಾರ: ಬಾಲಕಿಯ ಹುಟ್ಟುಹಬ್ಬದ ಸುದಿನವೇ ಆಕೆಯನ್ನು ಸಾಮೂಹಿಕ ಅತ್ಯಾಚಾರಗೈದ ಆಘಾತಕಾರಿ ಘಟನೆಯೊಂದು ಕೋಲಾರ ಜಿಲ್ಲೆಯ ಕಾಮಸಮುದ್ರ ಎಂಬಲ್ಲಿ ನಡೆದಿದೆ.
ಈ ಹಿನ್ನಲೆಯಲ್ಲಿ ನಾಲ್ಕು ಕಾಮುಕರನ್ನು ಬಂಧಿಸಲಾಗಿದೆ. ಆನಂದ್ ಕುಮಾರ್, ಕಾಂತರಾಜು, ಪ್ರವೀಣ್ ಮತ್ತು ವೇಣು ಬಂಧಿತ ಆರೋಪಿಗಳು.
9ನೇ ತರಗತಿಯಲ್ಲಿ ಓದುತ್ತಿರುವ ಬಾಲಕಿ ತನಗೆ ಹೊಸ ಬಟ್ಟೆ ಮತ್ತು ಚಾಕೊಲೇಟ್‌ಗಳನ್ನು ಖರೀದಿಸಿ ಕೊಡದ ಕಾರಣ ಹೆತ್ತವರ ಮೇಲೆ ಕೋಪಗೊಂಡಿದ್ದಳು. ನಂತರ ಸಿಡುಕಿನಿಂದ ಶಾಲೆಗೆ ಹೋಗದೆ ಶುಕ್ರವಾರ ಬಂಗಾರಪೇಟೆಗೆ ಬಸ್ ಹತ್ತಿದಳು.
ಆಕೆ ಒಬ್ಬಳೇ ಬಸ್ ಹತ್ತಿದ್ದನ್ನು ಕಂಡ ದುಷ್ಕರ್ಮಿಗಳು ಆಕೆಯೊಂದಿಗೆ ಮುದ್ದಾಗಿ ಮಾತನಾಡಿ ಉದ್ಯಾನವನಕ್ಕೆ ಕರೆದೊಯ್ದು ಸಂಜೆಯವರೆಗೂ ಕಾಲ ಕಳೆದಿದ್ದಾರೆ. ತಡರಾತ್ರಿ ಆರೋಪಿಗಳು ಆಕೆಯನ್ನು ಖಾಸಗಿ ಬಸ್‌ನಲ್ಲಿ ತಣಿಮಡಗು ಗ್ರಾಮಕ್ಕೆ ಕರೆದೊಯ್ದಿದ್ದಾರೆ.
ದಾರಿಯಲ್ಲಿ ಆರೋಪಿಗಳು ಮದ್ಯ ಸೇವಿಸಿ ಪ್ರತ್ಯೇಕ ಸ್ಥಳದಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.
ದುಷ್ಕರ್ಮಿಗಳಾದ ಮೂವರು ಮೇಸ್ತ್ರಿಗಳು ಮತ್ತು ಒಬ್ಬ ಬಸ್ ಚಾಲಕ ಆಕೆಯ ಮೇಲೆ ಎರಗಿ ಈ ಕುಕೃತ್ಯ ಎಸಗಿದ್ದಾರೆ. ಬಾಲಕಿಯ ಕಿರುಚಾಟ ಕೇಳಿದ ಗ್ರಾಮಸ್ಥರು ಕಾಮಸಮುದ್ರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಧಾವಿಸಿದ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಬಾಲಕಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.




