ಕಡಬ: ಎಸ್ಟೇಟ್ ನಲ್ಲಿ ಅಕ್ರಮ ಕಾಡು ಪ್ರಾಣಿಗಳ ಹತ್ಯೆ ಪೊಲೀಸರ ದಾಳಿ: ಎಸ್ಟೇಟ್ ಮಾಲಕ ವಶಕ್ಕೆ
ಕಡಬ: ತಾಲೂಕಿನ ಕೊಂಬಾರಿನಲ್ಲಿರುವ ಎಸ್ಟೇಟ್ ನಲ್ಲಿ ಅಕ್ರಮ ಕಾಡು ಪ್ರಾಣಿಗಳ ಹತ್ಯೆ ಮತ್ತು ಜಾನುವಾರು ಹತ್ಯೆಯಾಗುತ್ತಿದೆ ಎಂಬ ಮಾಹಿತಿಯ ಮಧ್ಯೆಯೇ ಫೆ.7ರಂದು ಎಸ್ಟೇಟ್ ಒಳಗಿನಿಂದ ನಾಯಿಗಳು ಪ್ರಾಣಿಗಳ ಮೂಳೆಯನ್ನು ಕಚ್ಚಿಕೊಂಡು ಹೊರಗೆ ತಂದಿದ್ದು, ಇದನ್ನು ಗಮನಿಸಿದ ಊರವರು ಪೋಲಿಸರಿಗೆ ಮಾಹಿತಿ ನೀಡಿದ್ದ ಮೇರೆಗೆ ಕಡಬ ಎಸ್.ಐ. ರುಕ್ಮ ನೇತೃತ್ವದ ಪೊಲೀಸರು ದಾಳಿ ನಡೆಸಿದ್ದಾರೆ.
ಎಸ್ಟೇಟ್ ಮಾಲಕರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.ಈ ಎಸ್ಟೇಟ್ ಒಳಗಡೆ ನಿರಂತರ ಕಾಡು ಪ್ರಾಣಿಗಳ ಹತ್ಯೆ ಮಾಡಲಾಗುತ್ತಿದೆ, ಅಲ್ಲದೆ ಜಾನುವಾರು ಹತ್ಯೆ ಮಾಡುತ್ತಿರುವ ಬಗ್ಗೆ ಈ ಹಿಂದೆ ಸಾಕಷ್ಟು ದೂರುಗಳು ಕೇಳಿ ಬರುತ್ತಿತ್ತು, ಇದಕ್ಕೆ ಪೂರಕ ಎಂಬಂತೆ ಇಂದು ನಾಯಿಯೊಂದು ಪ್ರಾಣಿಗಳ ಅಸ್ಥಿಪಂಜರವನ್ನು ಎಸ್ಟೇಟ್ ಹೊರಗೆ ತಂದಿತ್ತು, ಇದನ್ನು ಗಮನಿಸಿದ ಸಾರ್ವಜನಿಕರು ಪೋಲಿಸರಿಗೆ ಮಾಹಿತಿ ನೀಡಿದ್ದಾರೆ.
ಈ ಮಧ್ಯೆ ಕಡಬ ಠಾಣಾ ಎಸ್.ಐ. ಅವರು ದಾಳಿ ನಡೆಸಿ ಮಾಲಕನನ್ನು ಹಾಗೂ ಪ್ರಾಣಿಯ ದೇಹದ ಭಾಗವೊಂದನ್ನು ವಶಪಡಿಸಿಕೊಂಡು ಠಾಣೆಗೆ ಕರೆ ತಂದ ಕೂಡಲೇ ಎಸ್ಟೇಟ್ ಒಳಗಡೆ ಪ್ರಾಣಿಗಳ ಅಸ್ಥಿಪಂಜರಕ್ಕೆ ಬೆಂಕಿ ನೀಡಿ ಸುಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.





